ಕೆಸವು

ಏರೇಸೀ ಕುಟುಂಬಕ್ಕೆ ಸೇರಿದ ಒಂದು ಬಹುವಾರ್ಷಿಕ ಗೆಡ್ಡೆಸಸ್ಯ.  ಕೊಲೋಕೇಸಿಯ ಆಂಟಿಕೋರಮ್ ಇದರ ವೈಜ್ಞಾನಿಕ ಹೆಸರು.  ಕೆಸ, ಕೆಸವು, ಶಾಮಗೆಡ್ಡೆ, ಸಾವಗೆಡ್ಡೆ, ಕಚ್ಚಾಚಿ ಮುಂತಾದವು ಇದರ ಪರ್ಯಾಯ ನಾಮಗಳು.  ಇಂಗ್ಲಿಷಿನಲ್ಲಿ ಟ್ಯಾರೊ ಎನ್ನಲಾಗುತ್ತದೆ.  ಇದು ಆಗ್ನೇಯ ಏಷ್ಯದ ಮೂಲವಾಸಿ.  ಭಾರತದಲ್ಲಿ ಎಲ್ಲ ಕಡೆಗಳಲ್ಲೂ ಸಾಮಾನ್ಯವಾಗಿ ಬೆಳೆಯುತ್ತದೆ.  ನದಿ ಮತ್ತು ಕೊಳಗಳ ದಡ, ಚೌಗುಭೂಮಿ, ತೇವಪೂರಿತ ಹಾಗೂ ನೆರಳಿರುವ ಕೆಸರು ಭೂಮಿಗಳಲ್ಲಿದು ಸ್ವಾಭಾವಿಕ.  ಇದರ ಗೆಡ್ಡೆ ಮತ್ತು ದಂಟುಗಳು (ಎಲೆಯ ತೊಟ್ಟು) ತರಕಾರಿಯಾಗಿ ಉಪಯೋಗವಾಗುವುದರಿಂದ ಇದನ್ನು ಬೆಳೆಸುವುದೂ ಉಂಟು.  ಶ್ರಾದ್ಧಾದಿ ಕರ್ಮಗಳಲ್ಲಿ ಇದರ ಬಳಕೆ ಇರುವುದನ್ನು ಗಮನಿಸಿದರೆ ಭಾರತದ ಜನಕ್ಕೆ ಇದರ ಪರಿಚಯ ಬಹು ಹಿಂದಿನಿಂದ ಇತ್ತು ಎನ್ನಬಹುದು.

ಕೆಸವಿನಲ್ಲಿ ಎಲೆಯ ಹಾಗೂ ತೊಟ್ಟಿನ ಬಣ್ಣಗಳಲ್ಲಿ ಮತ್ತು ಗೆಡ್ಡೆಯ ಗಾತ್ರ, ಆಕಾರ, ಬಣ್ಣ, ರುಚಿ ಮತ್ತು ಪೌಷ್ಟಿಕಾಂಶಗಳ ಪ್ರಮಾಣದಲ್ಲಿ ವೈವಿಧ್ಯವನ್ನು ಪ್ರದರ್ಶಿಸುವ ಹಲವಾರು ಬಗೆಗಳಿವೆ.  ಇವೆಲ್ಲ  ಬಗೆಗಳನ್ನೂ ಗಾಢ ಊದಾ ಬಣ್ಣದ ಎಲೆ ಮತ್ತು ತೊಟ್ಟುಗಳುಳ್ಳ ಗುಂಪು-ಹೀಗೆ ಎರಡು ಪ್ರಮುಖ ಗುಂಪುಗಳಿಗೆ ಸೇರಿಸಬಹುದು.  ಇವುಗಳಲ್ಲೆಲ್ಲ ಅತ್ಯಂತ ಮುಖ್ಯವಾದ ಬಗೆ ಎಸ್ಕ್ಯುಲೆಂಟು ಎಂಬುದು.

ಕೆಸವು ಒಂದು ಮೂಲಿಕೆ ಸಸ್ಯ. ಭೂಮಿಯೊಳಗೇ ಹುದುಗಿದ್ದು ವರ್ಷವರ್ಷವೂ ಸ್ವಲ್ಪಸ್ವಲ್ಪ ಬೆಳೆದು ಕವಲುಗಳನ್ನು ಉತ್ಪಾದಿಸುವ ಗೆಡ್ಡೆರೂಪದ ಕಾಂಡವೂ ಕವಲುಗಳಿಂದ ಹೊರಟು ಮೇಲ್ಮುಖನಾಗಿ ಭೂಮಿಯ ಮೇಲಕ್ಕೆ ಬೆಳೆಯುವ ಎಲೆಗಳೂ ಎಲೆಗಳಿಗಿರುವ ಉದ್ದನೆಯ ತೊಟ್ಟೂ ಕೆಸವಿನ ಪ್ರಮುಖ ಲಕ್ಷಣಗಳು.  ಗೆಡ್ಡೆಯ ಕವಲುಗಳು ಆಗಿಂದಾಗ್ಗೆ ಒಂದರಿಂದ ಒಂದು ಬೇರ್ಪಟ್ಟು ಹೊಸಗಿಡಗಳಾಗಿ ವೃದ್ಧಿಗೊಳ್ಳುತ್ತವೆ.  ಇದು ಕೆಸವಿನಲ್ಲಿ ಕಾಣಬರುವ ನಿರ್ಲಿಂಗರೀತಿ ವಂಶಾಭಿವೃದ್ಧಿಯ ಮುಖ್ಯ ಕ್ರಮ.
ಕೆಸವಿನ ಹೂಗಳು ಏಕಲಿಂಗಿಗಳು.  ಎರಡು ಬಗೆಯ ಹೂಗಳೂ ತಾಳಗುಚ್ಛ (ಸ್ಪೇಡಿಕ್ಸ್) ಮಾದರಿಯ ಹೂಗೊಂಚಲಿನಲ್ಲಿ ಸಮಾವೇಶಗೊಂಡಿವೆ.  ಹೂಗೊಂಚಲಿನ ಅಕ್ಷ ರಸಭರಿತವಾಗಿದ್ದು ಚರ್ಮಿಲವಾದ ಉಪಪತ್ರದಿಂದ (ಸ್ಪೇದ್) ಅವೃತವಾಗಿದೆ.
ಕೆಸವಿನ ಗೆಡ್ಡೆ, ಎಲೆ ಮತ್ತು ದಂಟುಗಳೆಲ್ಲ ನಾಲಗೆಯನ್ನು ಚುರುಗುಟ್ಟಿಸುವ ತೀಕ್ಷ್ಣವಾದ ವಸ್ತುವೊಂದಿದೆ.  ಇದಕ್ಕೆ ಕಾರಣ ಇವುಗಳಲ್ಲಿರುವ ಕ್ಯಾಲ್ಸಿಯಂ ಆಕ್ಸಲೇಟ್ ಎಂಬ ರಾಸಾಯನಿಕದ ಹರಳುಗಳು.  ಆದ್ದರಿಂದ ಗೆಡ್ಡೆ, ಎಲೆಗಳನ್ನು ಅಡುಗೆಗೆಂದು ಉಪಯೋಗಿಸುವಾಗ ಬೇಯಿಸಿ ಉಳಿಯುವ ನೀರನ್ನು ಚೆಲ್ಲಬೇಕು.  ಹೀಗೆ ಮಾಡಿದರೆ ಕೆಸವಿನಲ್ಲಿ ಪೌಷ್ಟಿಕಾಂಶವೆಲ್ಲ ನಷ್ಟವಾಗುವುದರಿಂದ ಇದರ ಬದಲು ಮೊದಲು ಹುಣಿಸೆ ನೀರಿನಿಂದ ತೊಳೆದು ಬೇಯಿಸುವಾಗ ಕೊಂಚ ಅಡುಗೆ ಸೋಡವನ್ನು ಸೇರಿಸಿದರೆ ಕೆಸವಿನ ಕಟುತ್ವ ಕಡಿಮೆಯಾಗುತ್ತದೆ.

ಕೆಸವು ಎಲ್ಲ ಬಗೆಯ ಮಣ್ಣಿನಲ್ಲಿ ಬೆಳೆಯಬಲ್ಲುದಾದರೂ ಸರಾಗವಾಗಿ ನೀರು ಇಳಿಯಬಲ್ಲ, ಸಾವಯವ ವಸ್ತುಗಳನ್ನು ಹೇರಳವಾಗುಳ್ಳ ಗೋಡುಮಣ್ಣಿನಲ್ಲಿ ಉತ್ಕøಷ್ಟವಾಗಿ ಬೆಳೆಯುತ್ತದೆ.  ಎಲ್ಲಿ ಬೆಳೆಸಿದರೂ ಇದಕ್ಕೆ ನೀರು ಮಾತ್ರ ಯಥೇಚ್ಛವಾಗಿ ಬೇಕು.  ಇದನ್ನು ಗೆಡ್ಡೆಗಳ ತುಂಡುಗಳಿಂದ ವೃದ್ಧಿಸುತ್ತಾರೆ.  ವರ್ಷಪೂರ್ತಿ ಇದನ್ನು ನೆಟ್ಟು ಬೆಳೆಸಬಹುದಾದರೂ ಭಾರತದಲ್ಲಿ ಫೆಬ್ರುವರಿ-ಜುಲೈ ತಿಂಗಳುಗಳ ನಡುವಣ ಅವಧಿಯಲ್ಲಿ ನೆಡುವುದೇ ವಾಡಿಕೆ.  ನೆಟ್ಟ 4-8 ತಿಂಗಳುಗಳ ಅನಂತರ ಗೆಡ್ಡೆಗಳನ್ನು ಭೂಮಿಯಿಂದ ಅಗೆದು ತೆಗೆಯಬಹುದು.  ಎಲೆಗಳು ಹಳದಿ ಬಣ್ಣಕ್ಕೆ ತಿರುಗಲಾರಂಭಿಸಿದ ಅನಂತರ ಅಗೆಯುವುದು ರೂಢಿಯಲ್ಲಿದೆ.  ಕೈಯಿಂದ ಇಲ್ಲವೆ ಸನಿಕೆಯಿಂದ ಗೆಡ್ಡೆಗಳನ್ನು ಅಗೆದು ಬಳಿಕ ಅವನ್ನು ನೀರಿನಿಂದ ತೊಳೆದು ಗಾತ್ರದ ಆಧಾರದ ಮೇಲೆ ವರ್ಗೀಕರಿಸಲಾಗುತ್ತದೆ.  ಇಳುವರಿ ಭೂಮಿಯ ಗುಣವನ್ನೂ ಕೆಸವಿನ ಬಗೆಯನ್ನೂ  ಅವಲಂಬಿಸಿ ಎಕರೆಗೆ 2,500 ಪೌಂಡಿನಿಂದ 10,000 ಪೌಂಡ್‍ವರೆಗೂ ವ್ಯತ್ಯಾಸವಾಗುತ್ತದೆ.

	ಕೆಸವಿನ ಗಿಡದ ಎಲ್ಲ ಭಾಗಗಳೂ ತಿನ್ನಲು ಯೋಗ್ಯವಾಗಿವೆ.  ಗೆಡ್ಡೆಗಳಲ್ಲಿ ಅಧಿಕ ಪರಿಮಾಣದಲ್ಲಿ ಪಿಷ್ಟವಿದೆ.  ಬೇಯಿಸಿದಾಗ ಒಂದು ಬಗೆಯ ವಿಶಿಷ್ಟ ವಾಸನೆಯನ್ನು ಹೊರಸೂಸುವ ಇದು ಆಲೂಗಡ್ಡೆಯಲ್ಲಿನ ಪಿಷ್ಟಕ್ಕಿಂತ ಸಿಹಿಯಾದದ್ದೂ ಬೇಗ ಬೇಯುವಂಥದೂ ಆಗಿದೆ.  ಗೆಡ್ಡೆಯ ರಾಸಾಯನಿಕ ಸಂಯೋಜನೆ ಹೀಗಿದೆ :  ಕಾರ್ಬೋಹೈಡ್ರೇಟ್ 22.1%, ಪ್ರೋಟೀನು 3.0%, ಲೋಹಾಂಶಗಳು 1,7%, ಕೊಬ್ಬು 0.1%, ತೇವಾಂಶ 73.1%.  ಇದಲ್ಲದೆ ಕ್ಯಾಲ್ಸಿಯಂ ಮತ್ತು ರಂಜಕ ಇವು ಸಹ ಗಣನೀಯ ಪರಿಮಾಣದಲ್ಲಿವೆ.  ಕೆಸವಿನ ಗೆಡ್ಡೆ ಆಲೂಗಡ್ಡೆಗಿಂತ ಹೆಚ್ಚು ಪುಷ್ಟಿಯುತವಾದುದು ಮತ್ತು ಸುಲಭವಾಗಿ ಜೀರ್ಣವಾಗುವಂಥದು ಎಂದು ಹೇಳಿಕೆಯಿದೆ.  ಇದರಲ್ಲಿನ ಪಿಷ್ಟಕಣಗಳು ಇತರ ಆಹಾರ ಸಸ್ಯದ ಪಿಷ್ಟಕಣಗಳಿಗಿಂತ ಅತ್ಯಂತ ಚಿಕ್ಕವು.

	ಕೆಸವಿನ ಗೆಡ್ಡೆಯನ್ನೂ ಎಲೆ ಹಾಗೂ ದಂಟುಗಳನ್ನೂ ತರಕಾರಿಯಾಗಿ ಬಳಸುತ್ತಾರೆ.  ಇದರ ಎಲೆಗಳಿಂದ ತಯಾರಿಸುವ ಪತ್ರೊಡೆ ಎಂಬ ತಿಂಡಿ ಬಹಳ ಪ್ರಖ್ಯಾತವಾಗಿದೆ. ಗೆಡ್ಡೆಯಿಂದ ಪಿಷ್ಟವನ್ನು ಹೊರತೆಗೆದು ಅದನ್ನು ಗಂಜಿ, ಬ್ರೆಡ್, ಬಿಸ್ಕಿಟ್ ಮುಂತಾದವನ್ನು ಮಾಡಲು ಬಳಸುವುದುಂಟು.  ಅಲ್ಲದೆ ಎಲೆಗಳ ತೊಟ್ಟಿನ ರಸವನ್ನು ಪ್ರತಿ ಬಂಧಕವಾಗಿ ಔಷಧಿ ರೂಪದಲ್ಲಿ ಉಪಯೋಗಿಸುವುದುಂಟು.		     		      			
	(ಎಚ್.ಕೆ.ಎಂ.; ಎನ್.ಆರ್.ವಿ.)